ಕ್ಯಾಂಕರ್ ಹುಳು

ಜಿಯೋಮಿಟ್ರಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪತಂಗ, ಸರ್ವವ್ಯಾಪಿ. ಪೇಲಿಯೊಕ್ರಿಟಿ ವರ್ನೇಟ (ವಸಂತದ ಕ್ಯಾಂಕರ್ ಹುಳು) ಮತ್ತು ಆಲ್ಸೊಫಿಲ ಪೊಮೆಟೇರಿಯ (ಮಾಗಿ ಕ್ಯಾಂಕರ್ ಹುಳು) ಎಂಬ ಎರಡು ಪ್ರಭೇದಗಳು ಮುಖ್ಯವಾದ ಕ್ಯಾಂಕರ್ ಹುಳುಗಳು. ಇವು ನಿಶಾಚರಿಗಳು. ಗಂಡು ಪತಂಗಗಳ ಅಗಲವಾದ ರೆಕ್ಕೆಯ ಮೇಲೆ ಅಲೆಅಲೆಯಾದ ಮಚ್ಚೆಗಳನ್ನು ಕಾಣಬಹುದು. ಪ್ರೌಢ ಹೆಣ್ಣುಗಳಿಗೆ ರೆಕ್ಕೆಗಳಿಲ್ಲ. ಗಂಡು ಹೆಣ್ಣುಗಳ ಬಣ್ಣದಲ್ಲಿ ವ್ಯತ್ಯಾಸ ಉಂಟು. ಎಲ್ಲ ಪತಂಗಗಳಂತೆ ಇವು ಸಹ ಬೆಳಕಿನಿಂದ ಆಕರ್ಷಿತವಾಗುತ್ತವೆ.

ಕ್ಯಾಂಕರ್ ಹುಳುವಿನ ಡಿಂಬ ವಿಶಿಷ್ಟ ರೀತಿಯದು. ಸಾಮಾನ್ಯವಾಗಿ ಇದರ ದೇಹದ ಹಿಂದಿನ ತುದಿಯಲ್ಲಿ 2-3 ಜೊತೆ ಮಿಥ್ಯಾಪಾದಗಳಿರುತ್ತವೆ; ಮಧ್ಯ ಭಾಗದಲ್ಲಿ ಕಾಲುಗಳಿಲ್ಲ. ಏನಾದರೂ ತೊಂದರೆಯಾದಾಗ ಇದು ಹಿಂದಿನ ಕಾಲಿನ ಮೇಲೆ ನಿಂತು ದೇಹವನ್ನು ನೆಟ್ಟಗೆ ನಿಲ್ಲಿಸುತ್ತದೆ. ಆಗ ಇದು ಕಡ್ಡಿಯಂತೆ ಕಾಣುವುದರಿಂದ ಶತ್ರುಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗುವುದು. ಆ ಸ್ಥಿತಿಯಲ್ಲಿ ಡಿಂಬ ನೆಲವನ್ನು ಅಳೆಯುತ್ತಿರುವ ಟೇಪಿನಂತೆ ಕಾಣುತ್ತದೆ. ಆದ್ದರಿಂದ ಇದನ್ನು ಅಳತೆಯ ಹುಳು (ಮೆಶರಿಂಗ್ ವರ್ಮ್) ಎಂದು ಕರೆಯುವುದುಂಟು. ಚಲನೆಯಲ್ಲಿ ಇದು ಕುಣಿಕೆ ಹುಳುಗಳನ್ನು ಹೋಲುತ್ತದೆ. ಡಿಂಬಗಳು ಗಿಡಮರಗಳ ಎಲೆಗಳನ್ನು ತಿಂದು ಬೆಳೆಯುತ್ತವೆ.

ವಸಂತ ಕ್ಯಾಂಕರ್ ಹುಳುವಿನ ಡಿಂಬ ಚಳಿಗಾಲದಲ್ಲಿ ಕೋಶಾವಸ್ಥೆಯನ್ನು ಸೇರುತ್ತದೆ. ಹೊರಬರುವ ಹೆಣ್ಣುಚಿಟ್ಟೆ ವಸಂತಕಾಲದಲ್ಲಿ ಮೊಟ್ಟೆಯಿಡುತ್ತದೆ. ಮಾಗಿ ಕ್ಯಾಂಕರ್ ಹುಳು ಚಳಿಗಾಲವನ್ನು ಮೊಟ್ಟೆಯ ಅವಸ್ಥೆಯಲ್ಲಿ ಕಳೆಯುತ್ತದೆ; ಚಳಿಗಾಲ ಕಳೆದ ಅನಂತರ ಹೊರಬರುವ ಹೆಣ್ಣುಪತಂಗ ಮೊಟ್ಟೆಯಿಡುತ್ತದೆ. ವಸಂತ ಕ್ಯಾಂಕರ್ ಹುಳುವಿಗೆ ಉದರಭಾಗದಲ್ಲಿ ಎರಡು ಜೊತೆ ಮಿಥ್ಯಾಪಾದಗಳಿದ್ದರೆ ಮಾಗಿ ಕ್ಯಾಂಕರ್ ಹುಳುವಿನ ಡಿಂಬಕ್ಕೆ ಮೂರು ಜೊತೆ ಮಿಥ್ಯಾಪಾದಗಳು ಇರುತ್ತವೆ.

ಕ್ಯಾಂಕರ್ ಹುಳುಗಳು ಫಲವೃಕ್ಷಗಳಿಗೂ ಇತರ ಬೆಲೆಬಾಳುವ ಮರಗಳಿಗೂ ದೊಡ್ಡ ಪಿಡುಗಾಗಿ ಪರಿಣಮಿಸಿವುದುಂಟು. ಇವುಗಳ ಡಿಂಬಗಳು ಎಲೆಗಳನ್ನೆಲ್ಲ ತಿಂದುಹಾಕಿ ಮರವನ್ನು ಬೋಳು ಮಾಡುತ್ತವೆ. ಇದರಿಂದ ಹಣ್ಣಿನ ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ. 				     						(ಬಿ.ಎಚ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ